Home | Contact Us 


CSS3 Menu Float by Css3Menu.com

ಈ ನೆಲದ ಒಡಲಲ್ಲಿ

ಈ ಮಣ್ಣಕುಡಿ ಮೇರುವಾಗಿ
ಬೆಳೆದು ನಿಂತಿದ್ದು ಗೊತ್ತು
ಬಳ್ಳಿಯಲಿ ಸುರಿವ ಮಲ್ಲಿಗೆಯ
ಎಣಿಕೆ ಮಾಡಿದವರು ಯಾರು?

ಈ ನೆಲದ ಒಡಲಲ್ಲಿ ಕಾವೇರಿ
ನದಿಯಾಗಿ ಹರಿದಿದ್ದು ಗೊತ್ತು
ಕಿರುತೊರೆಗಳ, ಸಿರಿಕೆರೆಗಳ
ಲೆಕ್ಕ ಇರಿಸಿದವರು ಯಾರು?

ಪಟ್ಟಣದ ಶ್ರೀರಂಗ ನಗುತ್ತ
ಹಾಯಾಗಿ ಮಲಗಿದ್ದು ಗೊತ್ತು
ನಾಡಿಗಾಗಿ ದುಡಿದ ದೇವತೆಗಳ
ಎಣಿಸ ನೋಡಿದವರು ಯಾರು?

ಸೊಂಪಾಗಿ ಸಂಭ್ರಮಿಸುವ ಭತ್ತ
ಪಚ್ಚೆಯಾಗಿ ಹಾಸಿದ್ದು ಗೊತ್ತು
ಬೀಸುವ ತಂಬೆಲರ ಪ್ರೀತಿಯ
ತುಂಬಿ ಅಳೆದವರು ಯಾರು?

ಬೆಳ್ಳಿ ಸಕ್ಕರೆ ಬೆಟ್ಟದೆತ್ತರಕೆ
ಸುರಿದು ರತ್ರಿಯಾಗಿದ್ದು ಗೊತ್ತು
ಮಂಡ್ಯದ ಚೆಲುವ ಮಧುಮನದ
ಸವಿಯ ಅರಿಯದವರು ಯರು!

-ಲತಾ ರಾಜಶೇಖರ್

Top

ಮಂಡ್ಯ ಜಿಲ್ಲೆಯ ಇತಿಹಾಸ

ಯಾವುದೇ ಒಂದು ಪ್ರದೇಶ ತನ್ನದೇ ಆದ ಭಾಷೆ, ಉಡುಗೆ, ತೊಡುಗೆ, ಆಹಾರ ನೆಲ-ಜಲ ಇವುಗಳಿಂದ ಪ್ರತ್ಯೇಕವಾಗಿ ಭಿನ್ನವಾಗಿ ನಿಲ್ಲುವುದು ಸಹಜ.

ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲಿ ಅತ್ಯಂತ ಚಿಕ್ಕ ಜಿಲ್ಲೆಗಳಲ್ಲಿ ಒಂದಾದ ಮಂಡ್ಯ ಜಿಲ್ಲೆ ಈ ಮೇಲ್ಕಂಡ ಲಕ್ಷಣಗಳನ್ನೆಲ್ಲಾ ಒಳಗೊಂಡಿದ್ದು, ತನ್ನದೇ ಆದ ಪ್ರಾಚೀನ ಇತಿಹಾಸ, ಸಾಹಿತ್ಯ ಹಾಗೂ ಸಾಂಸ್ಕ್ರತಿಕ ದಾಖಲೆಗಳನ್ನು ಒಡಲಲ್ಲಿರಿಸಿಕೊಂಡು ತನ್ನ ಅಸ್ತಿತ್ವವನ್ನು ದಾಖಲು ಮಾಡಿದೆ.

ಬೆಂಗಳೂರು ಮೈಸೂರು ಹೆದ್ದಾರಿಯ ನಡುವಿನ ಸಮತಟ್ಟಾದ ಭೌಗೋಳಕ ಪ್ರದೇಶ, ಹಿತವಾದ ವಾತಾವರಣಗಳನ್ನು ಒಳಗೊಂಡ ಈ ಜಿಲ್ಲೆಗೆ ಭತ್ತದ ಕಣಜ, ಸಕ್ಕರೆಯ ನಾಡು ಎಂದು ಅಭಿಮಾನದಿಂದ ಕರೆದ ಹೆಸರುಗಳುಂಟು.

ದಕ್ಷಿಣ ಮತ್ತು ನೈರುತ್ಯ ಪ್ರದೇಶದಲ್ಲಿ ಮೈಸೂರು ಜಿಲ್ಲೆ ಪೂರ್ವದಲ್ಲಿ ರಾಮನಗರ ಜಿಲ್ಲೆ, ವಾಯುವ್ಯದಲ್ಲಿ ಹಾಸನ ಹಾಗೂ ಉತ್ತರ ದಿಕ್ಕಿನಲ್ಲಿ ತುಮಕೂರು ಜಿಲ್ಲೆಗಳಿಂದ ಸುತ್ತುವರೆದ ಈ ಜಿಲ್ಲೆಯ ಇತಿಹಾಸ, ಶಿಲಾಯುಗದಿಂದ ಪ್ರಾರಂಭವಾಗಿ 4ನೇ ಶತಮಾನದ ಗಂಗರಿಂದ ಹಿಡಿದು, ರಾಷ್ಟ್ರಕೂಟರು, ಚೋಳರು, ಹೊಯ್ಸಳರು, ವಿಜಯನಗರ ಅರಸರು, ಯದುವಂಶದ ದೊರೆಗಳು, ಹೈದರ್ ಮತ್ತು ಟಿಪ್ಪುವಿನಿಂದ ಬ್ರಿಟಿಷ್ ರವರೆಗೆ ಬಂದು ನಿಲ್ಲುತ್ತದೆ.

ಈ ಜಿಲ್ಲೆಗೆ ಮಂಡ್ಯ ಎಂದು ಹೆಸರು ಬರಲು ಕಾರಣ, ಹಲವಾರು ಶಾಸನಗಳು, ಐತಿಹ್ಯಗಳ, ಸ್ಥಳ ಪುರಾಣಗಳು ಹೀಗೆ ಅನೇಕ ಊಹೇಗಳಿಂದ ಆವೃತ್ತವಾಗಿವೆ. ಸ್ಥಳ ಪುರಾಣಗಳ ಪ್ರಕಾರ ಮಂಡ್ಯವನ್ನು ಬಹು ಹಿಂದೆ ವೇದಾರಣ್ಯ ಎಂದು ಕರೆಯಲಾಗುತ್ತಿದ್ದು ನಂತರ ವಿಷ್ಣುಪುರ ಎಂದು ಹೆಸರಿಸಲಾಗಿದೆ. ವೇದಾರಣ್ಯ ಎಂಬ ಹೆಸರಿನ ಈ ಪ್ರದೇಶ ಒಂದು ದೊಡ್ಡ ಕಾಡಾಗಿದ್ದು ಮಾಂಡವ್ಯ ಎಂಬ ಮುನಿ ಈ ಪ್ರದೇಶದಲ್ಲಿ ತಪಸ್ಸನಾಚರಿಸಿದ ಪ್ರಯುಕ್ತ, ತಪಸ್ಸಿನ ಫಲವಾಗಿ ಈ ಕಾಡಿನ ಮೃಗಗಳು ವೇದಾ ಎಂಬ ಪದವನ್ನು ಉಚ್ಛರಿಸುತ್ತಿದ್ದವಂತೆ. ಈ ಮಾಂಡವ್ಯ ಮುನಿ ಜನಾರ್ಧನ ಅಥಾವ ವರದರಾಜಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ದೇವಾಲಯ ನಿರ್ಮಿಸಿದರಂತೆ. ಇವರ ಮರಣಾನಂತರ ಈ ಸ್ಥಳಕ್ಕೆ ಮಾಂಡವ್ಯ ಎಂದು ಹೆಸರು ಬಂದು, ಮುಂದೆ ಅದೇ ಮಂಡ್ಯ ಎಂದಾಯಿತು ಎಂಬುದು ಒಂದು ಹೇಳಿಕೆ.

ಆ ನಂತರ ಎಷ್ಟೋ ವರ್ಷಗಳ ನಂತರ ಬೇರೊಬ್ಬ ಮುನಿ ಇದೇ ಜಾಗದಲ್ಲಿ ತಪಸ್ಸು ಕೈಗೊಂಡಿದ್ದ ಸಮಯದಲ್ಲೀ ವಿಷ್ಣು ಅವನ ಕನಸಿನಲ್ಲಿ ಗೊಚರಿಸಿದ ಫಲವಾಗಿ ಈ ಪ್ರದೇಶಕ್ಕೆ ಆ ಮುನಿ ವಿಷ್ಣುಪುರ ಎಂದು ಹೆಸರಿಟ್ಟು ಕರೆದನೆಂದು ಹೇಳಿಕೆ ಇದೆ.

ಮುಂದೆ ದ್ವಾಪರಯುಗದಲ್ಲಿ ಇಂದ್ರವರ್ಮನೆಂಬ ದೊರೆ ಸಂತಾನವಿಲ್ಲದೆ, ವಿಷ್ಣುಪುರಕ್ಕೆ ಬಂದು ವಿಷ್ಣುವನ್ನು ಪೂಜಿಸಿದುದರ ಫಲವಾಗಿ ಅವನಿಗೆ ಗಂಡು ಮಗೆ ಹುಟ್ಟಿ , ಆತನಿಗೆ ಸೋಮವರ್ಮ ಎಂದು ನಾಮಕರಣ ಮಾಡಿ, ಈ ಸ್ಥಳದ ಜವಬ್ದಾರಿಯನ್ನು ಆತನಿಗೇ ವಹಿಸಿದಾಗ, ಮುಂದೆ ಆತ ಬೆಳೆದು ದೊಡ್ಡವನಾಗಿ ಈ ಪ್ರದೇಶವನ್ನು ಒಂದು ಅಗ್ರಹಾರವಾಗಿ ಪರಿವರ್ತಿಸಿ, ಸುತ್ತ ಭದ್ರ ಕೋಟೆ ನಿರ್ಮಿಸಿ, ಮುಂಡವೇಮು ಎಂದು ಹೆಸರಿಟ್ಟು ಅದೇ ಮುಂದೆ ಮಂಡ್ಯ ಎಂದು ಕರೆಯಲ್ಪಟ್ಟಿರುವುದೆಂದು ಹೇಳಲಾಗಿದೆ.

ಇವೆಲ್ಲಕ್ಕಿಂತ ಖಚಿತಬದ್ಧವಾದ ಸಾಕ್ಷಾಧಾರದ ಅಂಶವೆಂದರೆ ಕ್ರಿ.ಶ 1970ರ ಬೂದನೂರಿನ ಶಾಸನದಲ್ಲಿ ಮುಂಡೆಯ ಎಂಬ ಹೆಸರಿದ್ದು ಈ ಶಾಸನದಲ್ಲಿ ಶ್ರೀ ಮದನಾದಿಯಗ್ರ ಹಾರು ಮಂಡೆಯರ್ದ ಮಹಾಜನಾಂಗಳು ಎಂದು ಕೆತ್ತಲಾಗಿದ್ದು, ಇದರಿಂದ ಮೊದಲಿಗೆ ಇದು ಮಂಡೆಯ ಎಂಬ ಒಂದು ಅಗ್ರಹಾರವಾಗಿತ್ತು ಎಂಬುದಕ್ಕೆ ಸಾಕ್ಷಿ ಒದಗಿಸುತ್ತದೆ. ಅಷ್ಟೇ ಅಲ್ಲದೆ ಸೋಮವರ್ಮ ನಿರ್ಮಿಸಿದ ಮಂಡೆವೇಮು ಎಂಬ ಅಗ್ರಹಾರಕ್ಕೆ ಇದು ಪುಷ್ಟಿ ಕೊಡುತ್ತದೆ. ಇದಲ್ಲದೆ 1519 ನೇ ವರ್ಷದ ವಿಜಯನಗರ ಅರಸು ಶ್ರಿ ಕೃಷ್ಠದೇವರಾಯನ ಕಾಲದ ತಾಮ್ರ ಶಾಸನದಲ್ಲಿ ದೊರೆ ಘೃತಪರ್ವತ ದಾನವನು ಮಾಡಿತ್ತಿದ್ದ ಸಂದರ್ಭದಲ್ಲಿ ತುಂಗಾಭದ್ರಾ ನದಿ ದಡದ ವಿಠಲೇಶ್ವರ ದಿವ್ಯ ಸನಿಧಿಯಲ್ಲಿ ಧಾಮ ಸಂವತ್ಸರದ ಕಾರ್ತಿಕ ಪೌರ್ಣಿಮ ಭಾನುವಾರದಂದು ಉಭಯ ವೇದಾಂತ, ತಂತ್ರ ವ್ಯಾಖ್ಯಾನಗಳಲ್ಲಿ ಪ್ರಸಿದ್ದಿ ಪರೆದಿದ್ದ ವರದಚಾರ್ಯರ ಮಗ ಹಾಗೂ ರಾಮಾನುಜಾಚಾರ್ಯರ ಶಿಷ್ಯ ಪರಂಪರೆಯಲ್ಲಿ ಅಗ್ರಗಣ್ಯರಾಗಿದ್ದ ಗೋವಿಂದಚಾರ್ಯ ಎಂಬ ರಾಜರುಗಳಿಗೆ ಮಂಡೆಯ ಎಂಬ ಗ್ರಾಮವನ್ನು ಮತ್ತು ಅದಕ್ಕೆ ಸೇರಿದ ಉಪಗ್ರಾಮಗಳಾದ ಚಿಕ್ಕ ಮಂಡೆಯ, ಕಲ್ಲಹಳ್ಳಿ, ಹೊಸಳ್ಳಿ, ಕೋಣನಹಳ್ಳಿ ಗ್ರಾಮಗಳನ್ನು ಸರ್ವೆಮಾನ್ಯ ಅಗ್ರಹಾರವಾಗಿ ದಾನ ಮಾಡಿದ ಅಂಶ ತಿಳಿದು ಬರುತ್ತದೆ.

ಮುಂದೆ ಈ ಮಂಡೆಯ ಮಂಡಯವಾಗಿ ತದನಂತರ ಮಂಡ್ಯವಾಗಿ ರೂಪುಗೊಂಡಿರಬಹುದು ಎಂದು ಊಹಿಸಬಹುದು. ಇದಕ್ಕೆ ಪೂರಕವಾಗಿ ಇಂದು ಮಂಡ್ಯಕ್ಕೆ ಹೊಂದಿಕೊಂಡಂತೆ ಇರುವ ಉತ್ತರಕ್ಕೆ 1 ಕಿ.ಮೀ ದೂರದ ಚಿಕ್ಕಮಂಡ್ಯ, ದಕ್ಷಿಣಕ್ಕೆ 1 ಕಿ ಮಿ, ದೋರದ ಹೊಸಹಳ್ಳಿ, ಪಶ್ಚಮಕ್ಕೆ ಕಲ್ಲಹಳ್ಳಿ ಹಾಗೂ 2-3 ಕಿ.ಮೀ. ಅಂತರದಲ್ಲಿ ಕೋಣನಹಳ್ಳಿ ಇರುವುದು, ಮಂಡ್ಯ ಹಿಂದೆ ಒಂದು ಅಗ್ರಹಾರವಾಗಿತ್ತು ಎಂಬುದಕ್ಕೆ ಈ ಪ್ರಾಚೀನ ದಾಖಲೆಗಳು ಸಾಕ್ಷ್ಯ ಒದಗಿಸುತ್ತವೆ.