ಹೊಸಬೂದನೂರು
ನಿರ್ದೇಶನಮಂಡ್ಯ ನಗರದಿಂದ 8 ಕಿ.ಮೀ ದೂರದಲ್ಲಿರುವ ಹೊಸಬೂದನೂರು ಗ್ರಾಮದಲ್ಲಿ 13 ನೇ ಶತಮಾನದ ಹೊಯ್ಸಳರ ದೊರೆ 2 ನೇ ವೀರಬಲ್ಲಾಳನ ಕಾಲದಲ್ಲಿ ನಿರ್ಮಾಣಗೊಂಡ ಪ್ರಾಚೀನ ಕಾಶಿ ವಿಶ್ವನಾಥ ಮತ್ತು ಅನಂತ ಪದ್ಮನಾಭ ದೇವಾಲಯಗಳಿರುತ್ತವೆ. ಈ 2 ದೇವಾಲಯಗಳು ಏಕಕೂಟಾಕೃತಿಯ ವಾಸ್ತುಶಿಲ್ಪವನ್ನು ಹೊಂದಿರುತ್ತವೆ. ಪ್ರಸ್ತುತ ಈ 2 ದೇವಾಲಯಗಳು ರಾಜ್ಯಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟಿರುತ್ತವೆ.
ಇಲ್ಲಿಯ ಅನಂತಪದ್ಮನಾಭ (ಶಾಸನೋಕ್ತ ಕೇಶವ) ದೇವಾಲಯವು, ಸುಮಾರು ಮೂರು ಅಡಿ ಎತ್ತರದ ಜಗತಿಯ ಮೇಲೆ ಪೂರ್ವಾಭಿಮುಖವಾಗಿ ನಿಂತಿದ್ದು, ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮುಖಮಂಟಪಗಳನ್ನು ಹೊಂದಿದೆ.ಶಿಥಿಲಾವಸ್ಥೆಯಲ್ಲಿದ್ದ ಈ ದೇವಾಲಯವನ್ನು ರಾಜ್ಯ ಪುರಾತತ್ವ ಇಲಾಖೆಯು ಸುಮಾರು 14 ಲಕ್ಷ ರೂ.ವೆಚ್ಚದಲ್ಲಿ ದುರಸ್ತಿ ಮಾಡಿ ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಕಾಶಿವಿಶ್ವನಾಥಗುಡಿಯು ಇಲ್ಲಿಯ ಇನ್ನೊಂದು ಹೊಯ್ಸಳ ದೇವಾಲಯವಾಗಿದ್ದು, ಅನಂತಪದ್ಮನಾಭ ಗುಡಿಯ ವಿನ್ಯಾಸವನ್ನೇ ಹೊಂದಿದೆ.ಈ ದೇವಾಲಯದ ನವರಂಗದಲ್ಲಿ ಎರಡಕ್ಕೆ ಬದಲು ನಾಲ್ಕು ದೇವಕೋಷ್ಠಗಳಿದ್ದು, ನಡುವಣ ಛತ್ತು ವೈವಿಧ್ಯಮಯ ಕೆತ್ತನೆಯಿಂದಾಗಿ ಆಕರ್ಷಕವಾಗಿದೆ.