ಅರೆತಿಪ್ಪೂರು ಜೈನ ಸ್ಮಾರಕಗಳು
“ಬಸ್ತಿ ತಿಪ್ಪೂರು” ಎಂದೇ ಪರಿಚಿತವಿರುವ ಕೂಳಗೆರೆಯಿಂದ ಮೂರು ಕಿ.ಮೀ. ಉತ್ತರಕ್ಕೆ ಹಾಗೂ ತಾಲೂಕು ಕೇಂದ್ರ ಮದ್ದೂರಿನಿಂದ 15 ಕಿ.ಮೀ. ಆಗ್ನೇಯಕ್ಕಿದೆ. ಗಂಗ-ಹೊಯ್ಸಳ ಶಾಸನಗಳಲ್ಲಿ ತಿಪ್ಪೂರು, ತಿಪ್ಪೆಯೂರು, ಎಂದೆಲ್ಲಾ ಉಲ್ಲೇಖಗೊಂಡಿರುವ ತಿಪ್ಪೂರು ಗ್ರಾಮನಾಮದ ಮೂಲ ತಿರುಪೆರೂರು ಆಗಿದ್ದು, ಇಲ್ಲಿ ತಿರು (ಶ್ರೀ) ಗೌರವ ಸೂಚಕವಾಗಿದ್ದು, ಪಿರಿಯಊರು, ಪೆರೂರು ಆಗಿದೆ. ಇಲ್ಲಿಗೆ ಮರ‍್ನಾಲ್ಕು ಕಿ.ಮೀ. ಅಂತರದಲ್ಲಿರುವ ಕೂಳಗೆರೆಯ ಕ್ರಿ.ಶ. 917ರ ಶಾಸನದಲ್ಲಿ, ಸಗರ ಕುಲದ ಮಣಲಾರನು ಕನಕಗಿರಿ ತೀರ್ಥದ ಮೇಲೆ ಬಸದಿಯನ್ನು ನಿರ್ಮಿಸಿ, ಕನಕಸೇನ ಭಟಾರರಿಗೆ ತಿಪ್ಪೂರ ವಿವಿಧ ತೆರಿಗೆಗಳನ್ನು ದತ್ತಿ ಬಿಟ್ಟ ವಿವರವಿದೆ. ನಾಡಿನ ಪ್ರಸಿದ್ಧ ಜೈನ ಕೇಂದ್ರವಾದ ಶ್ರವಣಬೆಳಗೊಳದಷ್ಟೇ (ಹಾಸನ ಜಿಲ್ಲೆ) ಮಹತ್ವವನ್ನು ಪಡೆದಿದ್ದ ಈ ಊರು ಶ್ರವಣಬೆಳಗೊಳದಂತೆಯೇ ಎರಡು ಬೆಟ್ಟಗಳನ್ನು (ದೊಡ್ಡಬೆಟ್ಟ ಅಥವಾ ಕನಕಗಿರಿ (ಜೀನಗುಡ್ಡ) ಹಾಗೂ ಸವಣಪ್ಪನ ಗುಡ್ಡ) ಒಂದು ಕಿ.ಮೀ. ಅಂತರದಲ್ಲಿ ಹೊಂದಿದೆ.
ಗಂಗರ ಕಾಲದ ಸ್ತಂಭಗಳು ಜೈನ ಬಸದಿಯ ಪ್ರಾಚೀನತೆಯನ್ನು ಬಿಂಬಿಸುತ್ತವೆ. ಉಳಿದಂತೆ ಮಾರಮ್ಮನ ಗುಡಿ ಬಳಿ ಗಂಗರ ಕಾಲದ ಕಂಬಗಳಿದ್ದು ಅಲ್ಲಿರುವ ವಾಮನ ಮುದ್ರೆಕಲ್ಲು, ಶ್ರೀ ವೈಷ್ಣವ ಪ್ರಭಾವವನ್ನು ಸೂಚಿಸುತ್ತಿದ್ದು, ಊರ ಪ್ರವೇಶ ಭಾಗದಲ್ಲೇ ವಿಜಯನಗರ ಕಾಲದ ವೀರಗಲ್ಲುಗಳಿವೆ. ಇದೊಂದು ಎ.ಎಸ್.ಐ ಸಂರಕ್ಷಿತ ಸ್ಮಾರಕವಾಗಿದೆ.