ದರಿಯಾ ದೌಲತ್
ನಿರ್ದೇಶನಕೋಟೆಯ ಹೊರಗೆ, ಪೂರ್ವಕ್ಕಾದಂತೆ ಸಂಗಮಕ್ಕೆ ಹೋಗುವ ದಾರಿಯಲ್ಲಿ, ಕಾಲ್ನಡಿಗೆ ಅಂತರದಲ್ಲಿರುವ ದರಿಯ ದೌಲತ್ (ಸಾಗರ ಸಂಪತ್ತಿನ) ತೋಟ ಹಾಗೂ ಬೇಸಿಗೆ ಅರಮನೆಗಳು ಟಿಪ್ಪುವಿನ ವಿಶ್ರಾಂತಿ-ವಿಹಾರ ತಾಣವಾಗಿದ್ದು, ಆಕರ್ಷಕವಾಗಿವೆ. ಅರಮನೆಯ ಭಿತ್ತಿಯನ್ನೆಲ್ಲಾ ವ್ಯಾಪಿಸಿರುವ ವರ್ಣಚಿತ್ರಗಳ ಶ್ರೀಮಂತ ಅಲಂಕಾರಿಕೆಗೆ, ಈಸ್ಫಾನಿನ ಅರಮನೆಯೊಂದನ್ನು ಬಿಟ್ಟರೆ, ಭಾರತದಲ್ಲಿ ಇಂತಹ ಮತ್ತೊಂದು ನಿದರ್ಶನ ಕಾಣಸಿಗದೆಂದು ವಿದೇಶಿ ಪ್ರವಾಸಿ ರೀಸ್ ದಾಖಲಿಸಿದ್ದಾನೆ.
ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿರುವ ಬೇಸಿಗೆ ಅರಮನೆಯನ್ನು ಕೇಂದ್ರ ಪುರಾತತ್ವ ಇಲಾಖೆಯು ವಸ್ತು ಸಂಗ್ರಹಾಲಯವನ್ನಾಗಿ ಮಾರ್ಪಡಿಸಿ ಸಂರಕ್ಷಿಸುತ್ತಿದ್ದು, ಕಟ್ಟಡದ ಪೂರ್ವ-ಪಶ್ಚಿಮ ಭಿತ್ತಿಗಳ ಮೇಲೆ ಕ್ರಿ.ಶ.1780ರ ಕಾಂಚೀಪುರ ಯುದ್ಧ ದೃಶ್ಯ, ಹೈದರ್-ಟೀಪ್ಪು, ವಿವಿಧ ಪಾಳೇಗಾರರು ಹಾಗೂ ರಾಜರುಗಳನ್ನು ವಿವಿಧ ವರ್ಣಗಳಲ್ಲಿ ಚಿತ್ರಿಸಲಾಗಿದೆ. ಇಲ್ಲಿಯ ಭಿತ್ತಿ ವರ್ಣಚಿತ್ರ ಒಂದಲ್ಲಾ ಎರಡು ಬಾರಿ ಪುನಾರಚನೆಗೊಂಡಿದ್ದರೂ ಮೂಲವನ್ನು ಯಥಾರೀತಿ ಉಳಿಸಿಕೊಳ್ಳಲಾಗಿದ್ದು, ಬ್ರಿಟೀಷ್, ಫ್ರೆಂಚ್, ಮರಾಠ, ನಿಜಾಮ ಹಾಗೂ ದೇಶೀಯ ಪಾಳೇಗಾರರ ಸೈನಿಕರನ್ನು ಚಿತ್ರಿಸುವಲ್ಲಿ ಕಲಾವಿದನು ಸಾಂಸ್ಕೃತಿಕ ಅಂಶಗಳಿಗೆ ನೀಡಿರುವ ಒತ್ತು ಗಮನಾರ್ಹವಾಗಿದೆ.