ಮುಚ್ಚಿ

ಮಂಡ್ಯ ಜಿಲ್ಲೆಯ ಪ್ರಸ್ದಿದ್ದ ಪ್ರವಾಸಿ ತಾಣಗಳು

1.ಶಿವನಸಮುದ್ರ:

ತಾಲೂಕು ಕೇಂದ್ರ ಮಳವಳ್ಳಿಯಿಂದ 20 ಕಿ.ಮೀ. ಆಗ್ನೇಯಕ್ಕೆ, ಮಳವಳ್ಳಿ-ಕೊಳ್ಳೇಗಾಲ ರಸ್ತೆಯಲ್ಲಿ ಶಿವಸಮುದ್ರ ತೋಳ್ಗಂಬದಿಂದ ಒಂದು ಕಿ.ಮೀ. ಒಳಕ್ಕಾದಂತಿದೆ. ಕಾವೇರಿ ನೀರಿನಿಂದ ವಿದ್ಯುತ್ತನ್ನು ಉತ್ಪಾದಿಸುವ ಸಲುವಾಗಿ ಅಂದಿನ ದಿವಾನರಾಗಿದ್ದ ಸರ್.ಕೆ.ಶೇಷಾದ್ರಿ ಅಯ್ಯರ್ ಅವರು ನಿರಂತರವಾಗಿ ಪರಿಶ್ರಮಿಸಿದ್ದರ ಪರಿಣಾಮವಾಗಿ 30-6-1902ರಂದು, ಅಂದಿನ ಬ್ರಿಟೀಷ್ ರೆಸಿಡೆಂಟರಾದ ಕರ್ನಲ್ ಡೊನಾಲ್ಡ್ ರಾಬರ್ಟಸನ್ನರ ಪತ್ನಿಯಿಂದ ಇದು ಉದ್ಘಾಟಿಸಲ್ಪಟ್ಟಾಗ, ಆ ವೇಳೆಗಾಗಲೇ ನಿಧನರಾಗಿದ್ದ ದಿವಾನ ಕೆ.ಶೇಷಾದ್ರಿ ಅಯ್ಯರ್ ಅವರ ಹೆಸರನ್ನೇ ಈ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಇಡಲಾಯಿತು. ವಿದ್ಯುತ್ ಉತ್ಪಾದನೆಗೆ ಅನುಕೂಲವಾಗಲೆಂದು ಜಲಸಂಗ್ರಹಕ್ಕೆಂದು ಫೋರ್ಟ್ ಸಾಗರವನ್ನು ನಿರ್ಮಿಸಲಾಗಿದೆ.

ಮುಂದೆ ಅಲ್ಲಿಂದ ಬರುವ ನೀರನ್ನು ಫೊರ್ ಬೇ ಜಲಾಶಯದಲ್ಲಿ ನಿಯಂತ್ರಿಸಲಾಗಿದ್ದು, ಅಲ್ಲಿಂದ ದೊಡ್ಡ ಕೊಳವೆ ಮೂಲಕ ನೀರನ್ನು ಸುಮಾರು 450 ಅಡಿ ಆಳದಲ್ಲಿರುವ ವಿದ್ಯುತ್ ಜನಕ ಯಂತ್ರಗಳಿಗೆ ಹರಿಸಿದಾಗ ಯಂತ್ರಗಳು ವೇಗವಾಗಿ ಚಲಿಸಿ, ವಿದ್ಯುತ್ ಉತ್ಪಾದನೆ ಆಗುತ್ತದೆ. ದಿನಾಂಕ 6-8-1902ರಲ್ಲಿ 1250 ಎಚ್.ಪಿ.ಯ ಎರಡು ಸಂಚರಣ ಯಂತ್ರಗಳೊಂದಿಗೆ ವಿದ್ಯುತ್ ಉತ್ಪಾದಿಸತೊಡಗಿದ ಇದು ಆರಂಭದಲ್ಲಿ 5600 ಕಿ.ವ್ಯಾ ವಿದ್ಯುತ್ತನ್ನು ಉತ್ಪಾದಿಸುತ್ತಿದ್ದು, 144 ಕಿ.ಮೀ. ದೂರದಲ್ಲಿದ್ದ ಕೋಲಾರದ ಚಿನ್ನದ ಗಣಿಗೆ ಅಗತ್ಯವಿದ್ದ ವಿದ್ಯುತ್ತನ್ನು ತಂತಿಯ ಮೂಲಕ ಸರಬರಾಜು ಮಾಡುವುದೇ ಇದರ ಪ್ರಧಾನ ಉದ್ದೇಶವಾಗಿತ್ತು. ಕಾವೇರಿಯ ಎಡದಡದಲ್ಲಿರುವ ಗಗನಚುಕ್ಕಿ ಜಲಪಾತದ ಪಾಶ್ರ್ವ ದೃಶ್ಯ ವಿಶಿಷ್ಟ ಅನುಭವವನ್ನು ನೀಡುತ್ತದೆ.ಇದು ಕಾವೇರಿಯ ಎಡ ಕವಲಾಗಿದ್ದು, ಸುಮಾರು ಮುನ್ನೂರು ಅಡಿ ಎತ್ತರದಿಂದ ವೈಯ್ಯಾರದಿಂದ ಗಗನದಿಂದಲೇ ಧುಮುಕುತ್ತಿರುವಂತೆ ಭಾಸವಾಗುತ್ತಿದ್ದು, ಆದ್ದರಿಂದಲೇ ಗಗನಚುಕ್ಕಿ ಎಂಬ ಹೆಸರು ಬಂದಿದೆ.

2. ಕೊಕ್ಕರೆ ಬೆಳ್ಳೂರು:

ತಾಲೂಕು ಕೇಂದ್ರ ಮದ್ದೂರಿನಿಂದ 18 ಕಿ.ಮೀ. ವಾಯವ್ಯಕ್ಕಿದ್ದು, ಪ್ರಾಚೀನ ಶಾಸನಗಳಲ್ಲಿ `ಬೆಲ್ಲೂರು, ಬೆಳೂರು, ಚಿಕ್ಕಬೆಳೂರು’ ಎಂದೆಲ್ಲಾ ಉಲ್ಲೇಖಿತಗೊಂಡಿದ್ದು, ಹಿಂದೆ ಕಳಲೆ ನಾಡಿಗೆ ಸೇರಿತ್ತು.ಆದರೂ ಕಳೆದ ಐದು ಶತಮಾನಗಳಿಂದಲೂ ಹೊಂದಿರುವ ಕೊಕ್ಕರೆಗಳ ನಿಕಟ ಸಂಬಂಧದಿಂದಾಗಿ ನಿಸರ್ಗ ಪಕ್ಷಿಧಾಮವೆಂದೇ ಪ್ರಸಿದ್ಧವಾಗಿದೆ. ಜಿಲ್ಲೆಯ ರಂಗನತಿಟ್ಟು, ಹೇಮಗಿರಿ, ಮತ್ತು ಗೆಂಡೇಹೊಸಹಳ್ಳಿಯ ಪರಿಸರಕ್ಕಿಂತ ಇದು ಸ್ವಲ್ಪ ಭಿನ್ನವಾಗಿದ್ದು, ಊರ ಮಧ್ಯದಲ್ಲಿರುವ ಹುಣಸೆ, ಗೊಬ್ಬಳಿ ಮುಂತಾದ ಹತ್ತಾರು ಮರಗಳ ಮೇಲೆ, ಬೇರೆಡೆಗಳಿಂದ ವಲಸೆ ಬಂದು ಜನವರಿಯಿಂದ ಜುಲೈವರೆಗೆ ನೆಲೆಯೂರುವ ಕೊಕ್ಕರೆಗಳು ಗೂಡು ಕಟ್ಟಿ, ಮರಿ ಮಾಡಿಕೊಂಡು ಸ್ವಸ್ಥಾನಕ್ಕೆ ಹಿಂತಿರುಗುವುದರಿಂದ, ಬೆಳ್ಳೂರಿನೊಂದಿಗೆ ಕೊಕ್ಕರೆ ಪದವೂ ತಳಕು ಹಾಕಿಕೊಂಡಿದ್ದು, ಕೊಕ್ಕರೆ ಬೆಳ್ಳೂರು ಪ್ರಾಕೃತಿಕ ಪಕ್ಷಿಧಾಮವಾಗಿದೆ. ಈ ಊರ ಗಿಡಮರಗಳ ತುಂಬಾ ಕುಳಿತ ಕೊಕ್ಕರೆಗಳೆಷ್ಟೋ! ಗಗನದಲ್ಲಿ ಹಾರಾಡುತ್ತಿರುವುದೆಷ್ಟೋ !ಅವುಗಳ ಕೊಕ್ಕು, ಕೊರಳು, ಪಾದ ಹಾಗೂ ಪುಕ್ಕಗಳಲ್ಲಿರುವ ಕಿಂಚಿತ್ ವರ್ಣವ್ಯತ್ಯಾಸ ಒಡೆದು ಕಾಣುತ್ತಿದ್ದು, ಕೆಲವು ನಸುಗೆಂಪಾಗಿದ್ದರೆ, ಹಲವು ನಸುಕಪ್ಪಾಗಿದ್ದು, ಹೆಚ್ಚಿನವು ಬಿಳುಪು ಬಣ್ಣದವು.

ಪ್ರತೀ ವರ್ಷ ಸಂಕ್ರಾಂತಿ (ಜನವರಿ) ಆಸುಪಾಸಲ್ಲಿ ಕಾಣಿಸಿಕೊಳ್ಳುವ ಹೆಜ್ಜಾರ್ಲೆ (ಪೆಲಿಕಾನ್) ಹಾಗೂ ಬೆಳ್ಳಕ್ಕಿಗಳು ಗೂಡು ಕಟ್ಟಿ, ಮೊಟ್ಟೆಯಿಕ್ಕಿ ಮರಿ ಮಾಡಿಕೊಂಡು ಮಳೆಗಾಲಕ್ಕೆ (ಜುಲೈ) ಮೊದಲು, ಬಾಣಂತನಕ್ಕೆ ತೌರಿಗೆ ಬಂದ ಹೆಣ್ಣು ಮಗಳಂತೆ ಬಲಿತ ಮರಿಗಳೊಂದಿಗೆ ಸ್ವಸ್ಥಾನಕ್ಕೆ ಕಾಲ್ತೆಗೆಯುತ್ತವೆ.

3. ಆದಿಚುಂಚನಗಿರಿ:

ತಾಲೂಕು ಕೇಂದ್ರ ನಾಗಮಂಗಲದಿಂದ 20 ಕಿ.ಮೀ. ಉತ್ತರಕ್ಕೆ ಚುಂಚನಹಳ್ಳಿಯಿಂದ ಪೂರ್ವಕ್ಕಾದಂತಿರುವ ಶ್ರೀಕ್ಷೇತ್ರ.ಒಕ್ಕಲಿಗರ ಎರಡು ಗುರುಪೀಠ ಮಠಗಳಲ್ಲಿ ಒಂದಾದ ಇಲ್ಲಿಯ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠವು ಪ್ರಸಿದ್ಧವಾಗಿದೆ.ರಾಮಾಯಣ ಕಾಲದಷ್ಟು ಪ್ರಾಚೀನ ಪೌರಾಣಿಕ ಹಿನ್ನೆಲೆಯನ್ನುಳ್ಳ ಇದು, ಪ್ರಾಚೀನ ಶಾಸನಗಳಲ್ಲಿ ಚುಂಚನಕೋಟೆ (ಕ್ರಿ.ಶ.1205), ಚುಂಚನಹಳ್ಳಿ (ಕ್ರಿ.ಶ.1484), ಆದಿಚುಂಚನಗಿರಿ (ಕ್ರಿ.ಶ.1896) ಎಂದೆಲ್ಲಾ ಉಲ್ಲೇಖಿತಗೊಂಡಿದ್ದು, ಹೊಯ್ಸಳರ ಕಾಲದಿಂದಲೂ ಕಲ್ಕುಣಿ ನಾಡೊಳಗಿತ್ತು. ಈವರೆಗೆ ಒಂಬತ್ತು (ಚುಂಚನಹಳ್ಳಿಯಲ್ಲಿ ನಾಲ್ಕು ಹಾಗೂ ಬೆಟ್ಟದ ಮೇಲೆ ಐದು) ಶಾಸನಗಳು ಇಲ್ಲಿಂದ ವರದಿಯಾಗಿವೆ. ಚುಂಚನೆಂಬುವನಿಂದ ನಿರ್ಮಿಸಲ್ಪಟ್ಟ, ಇಲ್ಲವೇ `ಚುಂಚಲಗಿಡ’ ಹೇರಳವಾಗಿದ್ದರಿಂದ ಊರಿಗೆ ಚುಂಚನಹಳ್ಳಿ ಎಂದೂ, ಬಳಿಯ ಬೆಟ್ಟಕ್ಕೆ `ಚುಂಚನಗಿರಿ’ ಎಂದೂ ಹೆಸರು ಬಂದಿತೆಂಬ ಅಭಿಪ್ರಾಯ ಇದೆ.

ಚುಂಚ-ಕಂಚ ರಾಕ್ಷಸ ಸೋದರರನ್ನು ಶಿವನು ಸಂಹಾರ ಮಾಡಿದ ಸ್ಥಳ ಇದೆಂಬ ಐತಿಹ್ಯವಿದ್ದು, ದ್ರಾವಿಡ ಶೈಲಿಯಲ್ಲಿ ಕಾಲಭೈರವನ ವಿಶಾಲವಾದ ಆಕರ್ಷಕ ದೇವಾಲಯವಿದೆ. ಶ್ರೀಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಇದ್ದು, ಉಳಿದುಕೊಳ್ಳಲು ಸುಸಜ್ಜಿತ ವಸತಿ ಸೌಕರ್ಯವಿದೆ.ಫಾಲ್ಗುಣ ಶುದ್ಧ ಹುಣ್ಣಿಮೆಯಂದು ಬೆಳಗಿನ ಜಾವ ಮೂರು ಗಂಟೆಗೆ ಜರುಗುವ ರಥೋತ್ಸವದಲ್ಲಿ ಪಾಲ್ಗೊಳ್ಳಲು ಅಸಂಖ್ಯಾತ ಭಕ್ತರು ಸೇರುತ್ತಾರೆ. ಹೂಪಲ್ಲಕ್ಕಿಯಲ್ಲಿ ಕುಳಿತ ಮಠದ ಸ್ವಾಮಿಗಳ ಮುಂದಾಳತ್ವದಲ್ಲಿ ತೇರೆಳೆಯುವ ದೃಶ್ಯ ಭಕ್ತರನ್ನು ಭಾವ ಪರವಶರನ್ನಾಗಿಸುತ್ತದೆ.